ಅಮೆರಿಕದ ಡೆಮೊಕ್ರೆಟಿಕ್ ಪಕ್ಷ

	ಅಮೆರಿಕ ಸಂಯುಕ್ತಸಂಸ್ಥಾನದ ರಾಜಕೀಯದಲ್ಲಿ ರೂಪುಗೊಂಡ ಮೊದಲ ಪಕ್ಷ. ಹದಿನೆಂಟನೆಯ ಶತಮಾನದ ಕೊನೆಯ ದಶಕದಲ್ಲಿ ಹ್ಯಾಮಿಲ್ಟನ್ ಕಟ್ಟಿದ ಫೆಡರಲಿಸ್ಟ್ ಗುಂಪಿಗೆ ಪ್ರತಿಯಾಗಿ ಥಾಮಸ್ ಜೆಫರ್‍ಸನ್ ಈ ಪಕ್ಷವನ್ನು ಸಂಘಟಿಸಿದ. ಸ್ವಲ್ಪಕಾಲದಲ್ಲೇ ಇದು ಪ್ರಜಾಪ್ರಭುತ್ವವಾದಿ ರಿಪಬ್ಲಿಕನ್ ಪಕ್ಷವೆಂಬ ಹೆಸರು ಪಡೆಯಿತು. ಪ್ರಜಾಪ್ರಭುತ್ವವಾದಿ ಎಂಬ ಪೂರ್ವಪ್ರತ್ಯಯವನ್ನು ಜೆಫರ್‍ಸನ್ ಉಪಯೋಗಿಸಲಿಲ್ಲ. ಈ ಪಕ್ಷದ ಮೂಲತತ್ತ್ವಗಳು-ಧನಿಕರು ಮತ್ತು ವರ್ತಕರು ಲಾಭದ ಕೊಳ್ಳೆ ಹೊಡೆಯುವುದನ್ನು ವಿರೋಧಿಸಿ ಕೃಷಿಕವರ್ಗಕ್ಕೆ ಹೆಚ್ಚು ಅಧಿಕಾರ ಕೊಡುವುದು ಮತ್ತು ಕೇಂದ್ರೀಕೃತ ಆಡಳಿತದ ಬಲವನ್ನು ಕುಗ್ಗಿಸಿ ಸ್ಥಳೀಯ ಸರ್ಕಾರದ ಅಧಿಕಾರವನ್ನು ಹೆಚ್ಚಿಸುವುದು. ಕೇಂದ್ರಸರ್ಕಾರ ಹೆಚ್ಚು ಬಲಯುತವಾಗಿರಬೇಕೋ ಪ್ರಾಂತೀಯ ಸರ್ಕಾರಗಳೋ ಎಂಬ ವಿಷಯದಲ್ಲಿ ಹದಿನೆಂಟನೆಯ ಶತಮಾನ ಕಳೆಯುವವರೆಗೂ ವಾದವಿವಾದಗಳು ನಡೆಯುತ್ತಲೇ ಇದ್ದುವು. 1801ರಲ್ಲಿ ಜೆಫರ್‍ಸನ್ ಅಧ್ಯಕ್ಷನಾದ ಅನಂತರ ಫೆಡರಲಿಸ್ಟ್ ಪಕ್ಷ ಕರಗಿಹೋಯಿತು. 1809ರವರೆಗೂ ಅವನು ಅಧ್ಯಕ್ಷನಾಗಿದ್ದ. ಆದರೆ ಆ ಕಾಲದಲ್ಲೇ ಸಂಯುಕ್ತ ರಾಜ್ಯಾಂಗವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚು ಅಧಿಕಾರವಿರಬೇಕೆಂದು ನಂಬಿದ್ದವರ ರಿಪಬ್ಲಿಕನ್ ಪಕ್ಷ ತಲೆಯೆತ್ತಿತು (ನೋಡಿ- ಅಮೆರಿಕದ-ರಿಪಬ್ಲಿಕನ್-ಪಕ್ಷ). 1828ರಲ್ಲಿ ಜಾಕ್‍ಸನ್ ಡೆಮೊಕ್ರೆಟಿಕ್ ಪಕ್ಷದ ಅಧ್ಯಕ್ಷನಾದ ಮೇಲೆ ಈ ಪಕ್ಷ ಮತ್ತೆ ಬಲಗೊಂಡಿತು. ಆಗತಾನೆ ಹೊಸ ಪ್ರಾಂತ್ಯಗಳು ನಿರ್ಮಾಣವಾಗುತ್ತಿದ್ದುವು. ಅಮೆರಿಕಕ್ಕೆ ಬಂದು ನೆಲೆಸಿದ್ದ ನಾನಾ ಜನಾಂಗಗಳ ಐಕ್ಯತೆ ಸಾಧಿಸುವುದು, ನೀಗ್ರೊ ಗುಲಾಮರ ಪ್ರಶ್ನೆ, ಇಂಥ ಬೃಹತ್ ಸಮಸ್ಯೆಗಳನ್ನು ಎದುರಿಸಬೇಕಾಗಿದ್ದ ಕಾಲ ಅದು. ಪ್ರತಿಯೊಂದು ಸಮಸ್ಯೆಯ ವಿಷಯದಲ್ಲೂ ತೀವ್ರ ಭಿನ್ನಾಭಿಪ್ರಾಯಗಳಿದ್ದುವು. ಗುಲಾಮರ ಪ್ರಶ್ನೆ ಡೆಮೊಕ್ರೆಟಿಕ್ ಪಕ್ಷದಲ್ಲೇ ಒಡಕನ್ನು ತಂದಿತು. 1854ರಲ್ಲಿ ಆ ಪ್ರಶ್ನೆಗೆ ಸಂಬಂಧಿಸಿದ ಅಂತರ್ಯುದ್ಧ ಕಳೆದಮೇಲೆ ಈ ಪಕ್ಷ ದುರ್ಬಲಗೊಂಡಿತು. ಆದರೂ ಉತ್ತರದ ರಾಜ್ಯಗಳ ಬೆಂಬಲ ಸಂಪಾದಿಸಿ 1885-89ರವರೆಗೂ 1893-97ರವರೆಗೂ ಅಧಿಕಾರದಲ್ಲಿತ್ತು. ಏಕಸ್ವಾಮ್ಯತಾ ಕೂಡುವ್ಯಾಪಾರಸಂಸ್ಥೆಗಳಿಗೆ (ಮನಾಪಲಿಸ್ಟಿಕ್ ಟ್ರಸ್ಟ್ಸ್) ವಿರೋಧವಾಗಿ ಹೋರಾಡಿ ಪ್ರಜಾಬೆಂಬಲಗಳಿಸಿ ಚುನಾವಣೆಯಲ್ಲಿ ಗೆದ್ದು 1913ರಲ್ಲಿ ವುಡ್ರೊ ವಿಲ್ಸನ್‍ನನ್ನು ಅಧ್ಯಕ್ಷನನ್ನಾಗಿ ಆರಿಸಿತು. ಅವನು 1921ರವರೆಗೂ ಅಧ್ಯಕ್ಷನಾಗಿದ್ದ. ನಿರುದ್ಯೋಗವನ್ನು ಹೋಗಲಾಡಿಸಿ ಕೈಗಾರಿಕಾ ಪ್ರಗತಿ ಸಾಧಿಸುತ್ತೇವೆಂಬ ಭರವಸೆ ಕೊಟ್ಟು 1933ರಲ್ಲಿ ಅಧಿಕಾರಕ್ಕೆ ಬಂದು 1953ರವರೆಗೂ ಮುಂದುವರಿಯಿತು. 1960ರಲ್ಲಿ ಪುನಃ ಅಧಿಕಾರಗಳಿಸಿತು. ಈ ಕಾಲದಲ್ಲಿ, ವಿದೇಶಾಂಗನೀತಿಯಲ್ಲಿ ಪ್ರತ್ಯೇಕತಾ ಧೋರಣೆ ತಳೆದಿದ್ದ ರಿಪಬ್ಲಿಕನ್ ಪಕ್ಷಕ್ಕೆ ವಿರೋಧವಾಗಿ ವಿಲ್ಸನ್, ರೂಸ್ûವೆಲ್ಟ್, ಟ್ರೂಮನ್ ಮುಂತಾದ ಸಮರ್ಥ ಅಧ್ಯಕ್ಷರ ನೇತೃತ್ವದಲ್ಲಿ ಪ್ರಪಂಚದ ಆಗುಹೋಗುಗಳು ಸಂಯುಕ್ತ ಸಂಸ್ಥಾನಕ್ಕೆ ಸಂಬಂಧಿಸಿದುವು ಎಂಬ ಉದಾತ್ತನೀತಿಗನುಸಾರವಾದ ವಿದೇಶಾಂಗನೀತಿಯನ್ನನುಸರಿಸಿತು.									  
     *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ